About us

ಬ್ರಾಹ್ಮಣ ಮಿತ್ರರ ವೇದಿಕೆ

ಇದೊಂದು ಸಂಘಟನೆಯೆಂಬುದು ಈಗಾಗಲೇ‌ ನೀವು ಊಹಿಸಿದ ವಿಚಾರ. ನಿಮ್ಮ ಊಹೆ ಸತ್ಯವೇ, ಇದೊಂದು ಸಂಘವೇ. ಆದರೆ ಈ ನಮ್ಮ ಸಂಘದಲ್ಲೊಂದು ವಿಭಿನ್ನತೆಯಿದೆ. ಈ ಸಂಘದ ಪ್ರಾರಂಭಕ್ಕೊಂದು ಸಂಕಲ್ಪವಿದೆ. ಆ ಸಂಕಲ್ಪಕ್ಕೆ ಧರ್ಮದ ರಕ್ಷೆಯಿದೆ. ಸನಾತನಧರ್ಮದ ಸಾರವೇ ನಮ್ಮ ಸಂಘದ ಮೂಲೋದ್ದೇಶವಾಗಿದೆ. ಪರೋಪಕಾರಾರ್ಥಮಿದಂ ಶರೀರಂ ಎನ್ನುವ ವಾಕ್ಯವನ್ನು ಪರಿಪಾಲಿಸುವ ಉದ್ದೇಶವನ್ನು ಹೊಂದಿದ, ನಾನಾಭಾಗಗಳಲ್ಲಿ ಪರಿಶ್ರಮದಿಂದ ಸ್ವಾಭಿಮಾನದಿಂದ ದುಡಿಯುತ್ತಿರುವ ಬ್ರಾಹ್ಮಣ ಯುವಕರ ಸಂಘವಿದು. ತನ್ನ ದುಡಿಮೆಯ ಒಂದು ಪಾಲನ್ನು ತನ್ನ ಕುಲಸ್ನೇಹಿತರ ಕ್ಷೇಮಕ್ಕಾಗಿ ಮೀಸಲಿಡುವ, ಸಮಾಜವು ನನಗೇನು ನೀಡಿದೆ ಎನ್ನುವುದಕ್ಕಿಂತ ಸಮಾಜಕ್ಕೆ ತನ್ನ ಕೊಡುಗೆಯನ್ನು ಕೊಡುವ ನಮ್ಮ ಸಂಘ ಬ್ರಾಹ್ಮಣ ಮಿತ್ರರ ವೇದಿಕೆ.

ಈ ಸಂಘವು ಹೇವಿಲಂಬಿ ಸಂ|ದ ಫಾಲ್ಗುಣ ಕೃಷ್ಣ ಸಪ್ತಮಿಯಂದು (08-03-2018) ಪ್ರಾರಂಭವಾಯಿತು. ಪ್ರಾರಂಭದಲ್ಲಿ ಬೆರಳೆಣಿಕೆಯಷ್ಟು ಜನರಿದ್ದ ಈ ಸಂಘದಲ್ಲಿ, ಇಂದು ಇನ್ನೂರಕ್ಕೂ ಹೆಚ್ಚು ಜನ ದಾನಿಗಳಿದ್ದಾರೆ.

ಜಲಬಿಂದುನಿಪಾತೇನ ಕ್ರಮಶಃ ಪೂರ್ಯತೇ ಘಟಃ |
ಸ ಹೇತುಃ ಸರ್ವವಿದ್ಯಾನಾಂ ಧರ್ಮಸ್ಯ ಚ ಧನಸ್ಯ ಚ ||

ಈ ಶ್ಲೋಕದಲ್ಲಿ ನೀರಿನ ಹನಿಯು ಕ್ರಮವಾಗಿ ಬೀಳುತ್ತಲೇ ಇದ್ದು ಸಂಘಟಿತವಾಗುವುದರಿಂದ ಮಡಿಕೆಯು ಹೇಗೆ ನೀರಿನಿಂದ ಪೂರ್ಣವಾಗುತ್ತದೆಯೋ ಅದೇ ರೀತಿ ಕ್ರಮವಾಗಿ – ನಿರಂತರವಾಗಿ ನಾವು ಮಾಡುವ ಅಧ್ಯಯನದಿಂದ ವಿದ್ಯೆಯೂ, ಸತ್ಕರ್ಮದ ನಿರಂತರತೆಯಿಂದ ಧರ್ಮವೂ, ನಿರಂತರವಾದ ಸಂಪಾದನೆಯಿಂದ ಧನವೂ ವೃದ್ಧಿಸುತ್ತದೆ ಎಂದು ಹೇಳಿದೆ.

ನಮ್ಮ ಸಂಘದ ಕಾರ್ಯಗಳೂ ಇದರಂತೆಯೇ. ನಿರಂತರವಾಗಿ ನಮಗೆ ನೀಡುವ ದಾನದ ಮೊತ್ತವನ್ನು ಸಂಗ್ರಹಿಸಿ ಧನವನ್ನೂ, ಅದನ್ನು ಆಶಯಕ್ಕೆ ಸರಿಯಾಗಿ ವಿನಿಯೋಗಿಸಿರುವುದರಿಂದ ಧರ್ಮವನ್ನೂ ಸಂಪಾದಿಸುತ್ತಿದ್ದೇವೆ. ಈ ಮಾರ್ಗದಲ್ಲಿ ನೀವೂ ಜೊತೆಯಾಗಬಹುದು.

ನಮ್ಮ ಸಂಘದ ಕಾರ್ಯಗಳನ್ನೊಮ್ಮೆ ಅವಲೋಕಿಸಿ ಸಂಪೂರ್ಣ ತೃಪ್ತಭಾವದಿಂದ ಸಹೃದಯರಾದ ನೀವು ನಮ್ಮ ಜೊತೆ ಇಡುವ ಹೆಜ್ಜೆ ನಮಗೊಂದು ಶಕ್ತಿ.

ಬ್ರಾಹ್ಮಣರ ಸಂಘಟನೆ ಸಧೃಡತೆ ಇಂದು ಅವಶ್ಯವಾಗಿ ಆಗಲೇಬೇಕಿದೆ. ಪ್ರಪಂಚದಲ್ಲಿ ನಾನು ಭಾರತೀಯನೆಂದು, ಭಾರತೀಯರಲ್ಲಿ ನಾನು ಕರ್ನಾಟಕದವನೆಂದು ಹೇಳುವ ಸ್ವಾಭಿಮಾನವೇ ನಾನು ಹಿಂದೂ, ನಾನು ಬ್ರಾಹ್ಮಣ ಎಂದು ಹೇಳಲು ಸಾಕು. ಹಾಗೆ ಹೇಳುವ ಬ್ರಾಹ್ಮಣರೆಲ್ಲ ಒಂದಾಗಬೇಕು. ಬ್ರಾಹ್ಮಣತ್ವದ ಸದ್ಗುಣಗಳೆಲ್ಲ ಅವಶ್ಯವಾಗಿ ನಮ್ಮಲ್ಲಿರಬೇಕು. ಒಟ್ಟಾಗಿ ನಾವಿಡುವ ಒಂದು ಹೆಜ್ಜೆ ನಮ್ಮ ಸಮಾಜಕ್ಕೂ, ನಾವಿರುವ ಸಮಾಜಕ್ಕೂ ಸರ್ವದಾ ಉಪಕಾರಿಯಾಗಿರಬೇಕು ಎನ್ನುವುದು ನಮ್ಮ ಆಶಯ. ಈ ಆಶಯದ ಜೊತೆ ನಿಮಗೆ ನಮ್ಮ ಬಳಗಕ್ಕೆ ಹೃತ್ಪೂರ್ವಕ ಸ್ವಾಗತ.. 🙏

ತಂಡವು ಈವರೆಗೆ ಮಾಡಿದ ಸಾಧನೆಗೆ ನೀವೆಲ್ಲ ಕೊಟ್ಟಂತಹ ಸಹಾಯದ ಜೊತೆ ಮುಂದಿನ ನಮ್ಮ ಯೋಜನೆಗೆ ನಿಮ್ಮ ಸಹಕಾರವಿರಲೆಂದು ನಮ್ಮ ಪ್ರಾರ್ಥನೆ‍….

Founders

Get to know the people behind Intact.

ಪ್ರಸ್ತುತ ಸಮಾಜದಲ್ಲಿ ಹಾಗು ಹಿಂದಿನಿಂದಲೂ… ಬ್ರಾಹ್ಮಣ ಸಮುದಾಯ ಮೇಲ್ವರ್ಗದ್ದು, ಸಮಸ್ಯೆಗಳು ಇಲ್ಲದೇ ಇರುವ ವರ್ಗ.ಎಂಬ ಕಾಲ್ಪನಿಕ ಭಾವನೆ ಪ್ರಚಲಿತವಾಗಿದೆ ,,, ಆದರೆ ವಸ್ತುಸ್ಥಿತಿ ಅಂದರೆ,, ಯಾವುದೇ ಕಥೆಗಳು ಪ್ರಾರಂಭವಾಗುವುದೇ ಒಂದೂರಿನಲ್ಲಿ ಒಬ್ಬ ಬಡ ಬ್ರಾಹ್ಮಣನಿದ್ದ, ಎಂದು.. ಇದೆ ಥರ… ಸ್ವಾವಲಂಬನೆ, ಸ್ವಾಭಿಮಾನವೇ ಶ್ರೇಷ್ಠ ಎಂದು ಬದುಕುವ ಸಮುದಾಯ ನಮ್ಮದು ಇದು ಹೆಗ್ಗಳಿಕೆ ಯು ಹೌದು ಹಾಗೆ ದೌರ್ಬಲ್ಯವು ಹೌದು. ಯಾವುದೇ ಸರ್ಕಾರಗಳು ಬಂದರು ನಮ್ಮ ಸಮುದಾಯ ಬರೀ ವೋಟ್ ಬ್ಯಾಂಕ್ ಆಗಿ ಪರಿವರ್ತನೆ ಆಗುತ್ತದೆ ಹೊರತು ಸರ್ಕಾರಿ ಸೌಲಭ್ಯಗಳಿಂದ ಪ್ರಜ್ವಲಿಸುವುದಿಲ್ಲ.. ಇವೆಲ್ಲವೂ ಸಿಗಬಹುದು ಆದರೆ ಮೊದಲಾಗಿ ನಮ್ಮ ನಮ್ಮಲ್ಲಿ ಒಗ್ಗಟ್ಟು ಮತ್ತು ಪರಸ್ಪರ ಸಹಾಯ ಪ್ರವೃತ್ತಿ ಬೆಳೆಯಬೇಕು.. ಹಲವಾರು ಕುಟುಂಬಗಳು ಇಂದು ಅಶಕ್ತತೆ ಇಂದ, ಅನಾರೋಗ್ಯದಿಂದ, ಮಾನಸಿಕ ಅಸ್ವಸ್ಥತೆಯಿಂದ ದುಡಿಮೆಯು ಇಲ್ಲದೇ… ಜೀವನ ನೆಡೆಸುತ್ತಿದ್ದಾರೆ… ಇವೆಲ್ಲ ಅಂಶಗಳ ಬಗ್ಗೆ ಹಲವಾರು ವೇದಿಕೆಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗಳನ್ನು ಕೇಳಿದ್ದೇವೆ ಮಾಡಿದ್ದೇವೆ ಕೂಡ.. ಆದರೆ ನಮ್ಮನ್ನು ಬೆಳೆಸಿದ ನಮ್ಮ ಸಮುದಾಯದ ಒಳಿತಿಗೆ ಬರೀ ಮಾತಿನಲ್ಲಿ ಅಲ್ಲದೆ ಕೃತಿ ಮೂಲಕ ಏನಾದರು ಮಾಡೋಣ ಎಂದು 6 ಜನ ಸಮಾನ ಮನಸ್ಕರು ವಾಟ್ಸಪ್ಪ್ ಗ್ರೂಪ್ ನಲ್ಲಿ ಮಾಡಿದ ಚಿಂತನೆಯ ಫಲವೇ ಈ ಬ್ರಾಹ್ಮಣ ಮಿತ್ರ ವೇದಿಕೆ.

ಸಾಮಾಜಿಕ ಜಾಲತಾಣವನ್ನು ಕಾಡುಹರಟೆಯಲ್ಲಿ ತೊಡಗಿಸಿಕೊಳ್ಳುವ ಬದಲು ಹೀಗೆ ಸಹಾಯ ಮಾಡುವ ಅರ್ಥಪೂರ್ಣ ಸೇವೆಯನ್ನು ಮಾಡುವುದರಲ್ಲಿ ಉಪಯೋಗಿಸುತ್ತಿದ್ದೇವೆ ಎಂಬುದು…ತೃಪ್ತಿಕರವಾದ ಸಂಗತಿ.

ಬ್ರಾಹ್ಮಣ ಮಿತ್ರರು ಎಂಬ ಒಂದು ಗ್ರೂಪ್ ನಲ್ಲಿ ಶುರುವಾದ ಈ ಚಿಂತನೆ, ಬೃಹದಾಕಾರವಾಗಿ ಬೆಳೆದು, ಏನಾದರು ಸಹಾಯ ಮಾಡಬೇಕು ಎಂಬ ಹಂಬಲ ಹೆಚ್ಚಾಯಿತು.. ಮಾಡಬೇಕು ಸರಿ ಆದರೆ ಮಾಡುವುದು ಹೇಗೆ?? ಎಲ್ಲರಿಗೂ ಸಹಾಯ ಮಾಡಬೇಕೆಂಬ ಮನಸ್ಸಿರುತ್ತದೆ ಆದರೆ ಅದಕ್ಕೆ ಸರಿಯಾದ ವೇದಿಕೆ ಬೇಕಾಗತ್ತೆ. ಆ ಒಂದು ವೇದಿಕೆಯೇ ಬ್ರಾಹ್ಮಣ ಮಿತ್ರರ ವೇದಿಕೆ….

ಹನಿ ಹನಿ ಗೂಡಿದರೆ ಹಳ್ಳ ಎಂಬಂತೆ. ತಮ್ಮ ದುಡಿಮೆಯಲ್ಲಿಯೇ ಸ್ವಲ್ಪ ಮೊತ್ತವನ್ನು ಸಮಾಜದ ಸಮುದಾಯದ ಏಳಿಗೆಗೆ ಬಳಸೋಣ ಎಂಬ ಕಾನ್ಸೆಪ್ಟ್..ಮೊದಲು ಶುರು ಮಾಡಿದ ಈ 6 ಜನ…ಇದಕ್ಕೆ Good to Great ಎಂಬ ಥೀಮ್ ನಲ್ಲಿ ಬೆಳೆಸಿದರು ತದನಂತರ ಕಾನೂನಾತ್ಮಕವಾಗಿ ರಿಜಿಸ್ಟರ್ ಆಗಿ ಬ್ರಾಹ್ಮಣ ಮಿತ್ರರ ವೇದಿಕೆ ಆಗಿ ಬದಲಾಯಿತು. ಇವತ್ತು ವೇದಿಕೆಯಲ್ಲಿ ಸರಿಸುಮಾರು 220 ಜನರ ಅದ್ಭುತ ಪ್ರೇರಣೆ ಇದೆ.